ಜಾಮೀನು 2

ಜಾಮೀನು-(Surety) ಉತ್ತರದಾಯಿ. ಪರ್ಯಾಯ ಪದವಾಗಿ ಬಳಸಬಹುದೆಂದು ನನ್ನ ಅನಿಸಿಕೆ. ಕಾರಣ ಈ ಕರಾರಿನಲ್ಲಿ ಉತ್ತರದಾಯಿಯ ಹೊಣೆಗಾರಿಕೆ ಪ್ರಧಾನ ಋಣಿಯ (Principal debtor) ವಿಫಲತೆಯಾಧಾರವಾಗಿರುವುದು ಅಥವಾ ಆಂಗ್ಲ ಪದ suretyಯನ್ನು ಸ್ಯೂರಿಟಿಯೆಂದು ಕನ್ನಡಿಕರಿಸಿದರೆ ಅರ್ಥವತ್ತಾಗುವುದು. 

ಸ್ವತ್ತು ಹಸ್ತಾಂತರ ಅಧಿನಿಯಮ (transfer of property act) ಈ ಪದದ ಬದಲಿಗೆ ಆಸ್ತಿ ವರ್ಗಾವಣೆ ಅಧಿನಿಯಮ ಹೆಚ್ಚು ಅರ್ಥಪೂರ್ಣ ಕಾರಣ ಸ್ವತ್ತು ಮತ್ತು ಆಸ್ತಿ : ಹಾಗೂ ವರ್ಗಾವಣೆ-ಹಸ್ತಾಂತರ ಎರಡು ಪದಗಳು ವಿಭಿನ್ನ ಅರ್ಥಗಳನ್ನು ನೀಡುವುದು.

ಒಂದು ವ್ಯಕ್ತಿ ನೀಡಿದ ಆಶ್ವಾಸನೆಯನ್ನು ಕಾರ್ಯಗತಗೊಳಿಸಲು ಅಥವಾ ಅವನು ಸಂದಾಯ ಮಾಡಬೇಕಾದ ಸಾಲದ ಹಣವನ್ನು ಸಂದಾಯ ಮಾಡಲು ತಪ್ಪಿದ ಸಂದರ್ಭದಲ್ಲಿ, ಆ ಆಶ್ವಾಸನೆಯನ್ನು ಕಾರ್ಯಗತಗೊಳಿಸುವ, ಅಥವಾ ತತ್ಸಂಬಂಧದ ಹಣವನ್ನು ತಾನು ಸಂದಾಯಮಾಡುವ, ಕರಾರಿಗೆ ಇನ್ನೊಂದು ವ್ಯಕ್ತಿ ನೀಡಿದ ಭರವಸೆ. ಈ ಭರವಸೆಯನ್ನು ನೀಡಿದಾತ ಜಾಮೀನುದಾರ (ಷೂರಿಟಿ). ಜಾಮೀನುದಾರನ ಹೊಣೆಗಾರಿಕೆ ಮತ್ತು ಹಕ್ಕುಬಾಧ್ಯತೆಗಳನ್ನು ಕುರಿತ ಮುಖ್ಯ ನಿಯಮಗಳು ಭಾರತದ ಕರಾರುಗಳ ಅಧಿನಿಯಮದಲ್ಲಿ ಅಡಕವಾಗಿವೆ. ಸ್ವತ್ತು ಹಸ್ತಾಂತರ ಅಧಿನಿಯಮ ಮತ್ತು ಇತರ ಅಧಿನಿಯಮಗಳಲ್ಲೂ ಈ ಸಂಬಂಧವಾದ ನಿಯಮಗಳು ಇವೆ.

ಜಾಮೀನು ಕೇಳುವ ಅಥವಾ ಜಾಮೀನುದಾರನಾಗುವ ಪದ್ಧತಿ ಅತ್ಯಂತ ಪುರಾತನವಾದ್ದು. ಮಾನವನು ಸಾಮಾಜಿಕ ಜೀವನವನ್ನು ಆರಂಭಿಸಿದಾಗಿನಿಂದ ಜನರು ವ್ಯಾವಹಾರಿಕವಾಗಿ ಇನ್ನೊಬ್ಬರ ಪರವಾಗಿ ಹೊಣೆಗಾರಿಕೆ ವಹಿಸಿಕೊಳ್ಳುತ್ತ ಬಂದಿದ್ದಾರೆ. ಈ ರೀತಿಯ ಹೊಣೆಗಾರಿಕೆಗಳಲ್ಲಿ ಜಾಮೀನು ಪದ್ಧತಿಯೂ ಒಂದು. ಯಾರ ಪರವಾಗಿ ಜಾಮೀನುದಾರ ಹೊಣೆಗಾರನಾಗಿರುವನೋ, ಅವನನ್ನು ಮುಖ್ಯ ಋಣಿ (ಪ್ರಿನ್ಸಿಪಲ್ ಡೆಟರ್) ಎನ್ನಲಾಗುವುದು. ಯಾರಿಗೆ ಜಾಮೀನಿನ ಭರವಸೆ ದೊರೆತಿದೆಯೊ ಅವನು ಋಣದಾತ ಅಥವಾ ಧನಿ. ಕರಾರಿನಲ್ಲಿ ಬೇರೆ ರೀತಿ ಹೇಳಿರದಿದ್ದರೆ, ಜಾಮೀನುದಾರನ ಹೊಣೆಗಾರಿಕೆ ಮುಖ್ಯ ಋಣಿಯ ಹೊಣೆಗಾರಿಕೆಗೆ ಸಮಾನವಾಗಿರುತ್ತದೆ. ಅಲ್ಲದೆ ಕರಾರಿನಲ್ಲಿ ಜಾಮೀನುದಾರ ತನ್ನ ಹೊಣೆಗಾರಿಕೆ ಎಷ್ಟು ಎಂಬುದನ್ನು ನಿರ್ದಿಷ್ಟಗೊಳಿಸಬಹುದು. ಜಾಮೀನು ಸ್ವರೂಪಿ ಕರಾರಿಗೆ ಒಬ್ಬ ಅಥವಾ ಹಲವು ಜಾಮೀನುದಾರರು ಹೊಣೆಯಾಗಿರಬಹುದು. ಮುಖ್ಯ ಋಣಿಯ ಹೊಣೆಗಾರಿಕೆಯನ್ನು ರುಜುವಾತು ಮಾಡುವಂತೆಯೇ ಜಾಮೀನುದಾರನ ಹೊಣೆಗಾರಿಕೆಯನ್ನೂ ರುಜುವಾತು ಮಾಡಬೇಕಾಗುತ್ತದೆ.
ಜಾಮೀನುದಾರ ಒಂದು ವಿಶಿಷ್ಟ ವಹಿವಾಟಿಗೆ ಜಾಮೀನು ಆಗಿರಬಹುದು ಅಥವಾ ಕಾಲಕ್ರಮದಲ್ಲಿ ಪರಿಣಮಿಸುವ ಹಲವಾರು ವಹಿವಾಟುಗಳಿಗೆ ಅನ್ವಯವಾಗುವಂತೆ ಜಾಮೀನಾಗಿರಲು ಒಪ್ಪಿಕೊಳ್ಳಬಹುದು. ಎರಡನೆಯದಕ್ಕೆ ಸತತ ರೀತಿಯ ಜಾಮೀನು ಎನ್ನಲಾಗುತ್ತದೆ. ಉದಾಹರಣೆ: x ತನ್ನ ಮನೆಗಳನ್ನು ಬಾಡಿಗೆಗೆ ಕೊಟ್ಟಿರುತ್ತಾನೆ ಮತ್ತು ಬಾಡಿಗೆಯನ್ನು ವಸೂಲು ಮಾಡುವ ಕೆಲಸಕ್ಕೆ ಯಾರನ್ನಾದರೂ ನೇಮಿಸುವ ವಿಚಾರ ಮಾಡುತ್ತಾನೆ. ಪ್ರತಿ ತಿಂಗಳ ಬಾಡಿಗೆ ವಸೂಲಿ ಮತ್ತು ಸಂದಾಯದ ಕೆಲಸಕ್ಕೆ ಃ ಯನ್ನು ನೇಮಿಸಿಕೊಂಡರೆ, ತತ್ಸಂಬಂಧವಾಗಿ ಐದು ಸಾವಿರ ರೂಪಾಯಿಗಳವರೆಗೆ ಅ ಎಂಬವನು ಜಾಮೀನಾಗಿರಲು ಒಪ್ಪಿಗೆ ಕೊಡುತ್ತಾನೆ. ಇಲ್ಲಿ ಅ ಒಪ್ಪಿಕೊಂಡಿರುವುದು ಸತತ ರೀತಿಯ ಜಾಮೀನು ಎನಿಸಿಕೊಳ್ಳುತ್ತದೆ. ಸತತ ರೀತಿಯ ಜಾಮೀನನ್ನು ನೋಟೀಸು (ತಿಳಿವಳಿಕೆ) ಕೊಡುವುದರ ಮೂಲಕ ಮುಂದಿನ ವಹಿವಾಟುಗಳ ಸಂಬಂಧದಲ್ಲಿ ರದ್ದುಮಾಡಿಕೊಳ್ಳಬಹುದು. ಕರಾರಿನಲ್ಲಿ ವ್ಯತಿರಿಕ್ತವಾಗಿ ಹೇಳಿರದಿದ್ದ ಪಕ್ಷದಲ್ಲಿ, ಜಾಮೀನುದಾರ ಮೃತನಾದರೆ ಮುಂದಿನ ವಹಿವಾಟುಗಳ ಸಂಬಂಧದಲ್ಲಿ ಸತತ ರೀತಿಯ ಜಾಮೀನು ರದ್ದಾಗುತ್ತದೆ. ಮುಖ್ಯ ಋಣಿ ಮತ್ತು ಧನಿ-ಉಭಯರೂ ಸೇರಿ, ಜಾಮೀನುದಾರನ ಒಪ್ಪಿಗೆಯಿಲ್ಲದೆ, ಕರಾರಿನ ಷರತ್ತುಗಳನ್ನು ಮಾರ್ಪಾಡು ಮಾಡಿಕೊಂಡರೆ, ಹಾಗೆ ಮಾರ್ಪಾಡು ಆದಾಗಿನಿಂದ ಮುಂದಿನ ವಹಿವಾಟುಗಳ ಸಂಬಂಧದಲ್ಲಿ ಜಾಮೀನುದಾರ ಹೊಣೆಯಾಗಿರುವುದಿಲ್ಲ.

ಭಾರತದ ಕರಾರುಗಳ ಅಧಿನಿಯಮದ ಎಂಟನೆಯ ಅಧ್ಯಾಯದಲ್ಲಿ ಜಾಮೀನುದಾರನ ಹಕ್ಕುಬಾದ್ಯತೆಗಳನ್ನು ಕುರಿತು ಹೇಳಲಾಗಿದೆ.										(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ